ಕನ್ನಡ ಸಾಹಿತ್ಯದ ಸಾಗರದಲ್ಲಿ ಉತ್ತರ ಕರ್ನಾಟಕ ಭಾಗದ ಅದರಲ್ಲೂ ಮಹಿಳೆಯರಿಗೆ ಸೂಕ್ತ ಅವಕಾಶ ಸಿಗದೇ ಇರುವ ಸಂಗತಿಯನ್ನು ಮನಗಂಡು ಅವರ ಅಭಿವ್ಯಕ್ತಿಗೆ ಇಂಬು ಕೊಡುವ ಉದ್ದೇಶದಿಂದ ಈ ಸಂಘವನ್ನು ಆರಂಭ ಮಾಡಲಾಯಿತು.
’ಉ.ಕ.ಲೇ.ಸಂ ’ಸಂಸ್ಥೆಯು ೧೪/೦೪/೧೯೮೫ ನಲ್ಲಿ ಪರಮಪೂಜ್ಯ ಶ್ರೀ ಜಗದ್ಗುರು ಡಾ||ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ, ಮೂರುಸಾವಿರ ಮಠದೊಳಗೆ ಪ್ರಾರಂಭಗೊಂಡಿತು.
ಹೀಗೆ ಡಾ.ಸರೋಜಿನಿ ಚವಲಾರ್ ಹಾಗೂ ಅವರ ಸಾಹಿತ್ಯ ಸಂಗಡಿಗರಿಂದ ಆರಂಭವಾದ ಈ ಸಂಘಕ್ಕೆ, ಡಾ.ಸರೋಜಿನಿ ಚವಲಾರ್ ಅವರನ್ನೇ ಆ ಸಂಘದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಅರ್ಥವಿಲ್ಲದ ಹಾಳು ಹರಟೆಯೊಳು ಮಹಿಳೆಯರು ಕಾಲ ಕಳೆಯದಿರಲೆಂಬ ಹೆಬ್ಬಯಕೆಯಿಂದ ಈ ಸಂಘವನ್ನು ನಿರ್ಮಿಸಲಾಯಿತು.
ಸ್ತ್ರೀಯರೊಳು ಹುದುಗಿರುವ ಕವಿತನ, ಸಾಹಿತ್ಯ ಹೊರ ಹೊಮ್ಮಿಸಿ ಅವರ ವ್ಯಕ್ತಿತ್ವ, ಪ್ರತಿಭೆ, ಸಂವೇದನೆ ಅಭಿವ್ಯಕ್ತಿಗೊಳಿಸುವುದೇ ಈ ಸಂಘದ ಉದ್ದೇಶವಾಗಿದೆ.
ಪ್ರಾರಂಭದಲ್ಲಿ ಸರಕಾರದಿಂದ ಯಾವ ಸಹಾಯವೂ ಇರಲಿಲ್ಲ.
ಸದಸ್ಯತ್ವ ಪಡೆದ ಮಹಿಳೆಯರೆಲ್ಲ ವಂತಿಗೆ ಕೂಡಿಸಿ ಕಾರ್ಯಕ್ರಮ ನಡೆಸುತ್ತಿದ್ದರು.
ಹೀಗೆ ಆರಂಭವಾದ ಸಂಸ್ಥೆಯು , ಕಥೆ, ಕಾದಂಬರಿ, ಪ್ರಬಂಧ ಮಂಡನೆ, ಕಾವ್ಯ ಕಮ್ಮಟ, ಸಾಹಿತ್ಯ ಸಂವೇದನೆ, ಕಥೆ-ಕಾದಂಬರಿ , ನಾಟಕ, ಹೀಗೆ ಅನೇಕ ಆಯಾಮಗಳನ್ನು ನಿರ್ವಹಿಸ ತೊಡಗಿತು.
ಬಹಳ ಜನ ಮಹಿಳೆಯರು ಇದರ ಉಪಯೋಗವನ್ನು ಪಡೆದುಕೊಂಡು ಕವಯಿತ್ರಿಯರು, ಕಾದಂಬರಿಕಾರ್ತಿಯರು, ವಚನಕಾರ್ತಿಯರು, ನಾಟಕಕಾರು ಹೀಗೇ ನಾನಾರೀತಿಯಲ್ಲಿ ಅಭಿವ್ಯಕ್ತಗೊಂಡು ಸಾಹಿತ್ಯದಲ್ಲಿ ದಾಪುಗಾಲು ಹಾಕುತ್ತ ರಾಷ್ಟ್ರಮಟ್ಟ, ಅಂತರಾಷ್ಟ್ರೀಯ ಮಟ್ಟದಲ್ಲೂ ಶೋಭಿಸುತ್ತಿದ್ದಾರೆ.